“ಕನ್ನಡ ನಮ್ಮ ಗೌರವ – ಕನ್ನಡಿಗ ನಮ್ಮ ಹೆಮ್ಮೆ.”
“ಮನೆಯೇ ಮೊದಲ ಶಾಲೆ, ಪೋಷಕರೇ ಮೊದಲ ಗುರುಗಳು.”
“ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ.”
ನವೆಂಬರ್ ೧, ೧೯೫೬ ರಂದು ಮೈಸೂರು ರಾಜ್ಯವನ್ನು "ಕರ್ನಾಟಕ" ಎಂದು ಮರುನಾಮಕರಣ ಮಾಡಿದ ದಿನ. ಕನ್ನಡಿಗರ ಗೌರವದ ದಿನವಾದ ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷ ಈ ದಿನ ವಿಶೇಷವಾಗಿ ಆಚರಿಸಲಾಗುತ್ತದೆ. ನವೆಂಬರ್ ೧, ೨೦೨೫ ರಂದು ಡಾನ್ ಬಾಸ್ಕೊ ಶಾಲೆ, ತ್ರಾಸಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಭಾವಪೂರ್ಣವಾಗಿ ಹಾಗೂ ನಾಡಭಕ್ತಿ ಮೆರೆಯುವ ವಾತಾವರಣದಲ್ಲಿ ವೈಭವೋಪೇತವಾಗಿ ಆಚರಿಸಲಾಯಿತು. ಕರ್ನಾಟಕದ ರೋಮಾಂಚಕ ಬಣ್ಣದಿಂದ ಧ್ವಜವು ಶಾಲೆಯ ಆವರಣದಲ್ಲಿ ಅಲಂಕರಿಸಲ್ಪಟ್ಟಿತ್ತು. ಬೆಳಿಗ್ಗೆ ೯.೩೦ಕ್ಕೆ ಶಾಲಾ ಪ್ರಾಂಶುಪಾಲರಾದ ವಂದನೀಯ ಫಾ. ಮ್ಯಾಕ್ಸಿಮ್ ಡಿಸೋಜಾರವರಿಂದ ಧ್ವಜಾರೋಹಣ ನಡೆಯಿತು. ಕನ್ನಡಾಂಬೆಗೆ ಎಲ್ಲರೂ ಪುಷ್ಪ ನಮನವನ್ನು ಸಲ್ಲಿಸಿದರು. ನಾಡಗೀತೆ ಹಾಡುವ ಮೂಲಕ ನಾಡಿನ ಹೆಮ್ಮೆಯನ್ನು ಪಸರಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಶಿಕ್ಷಕಿಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಆಡಳಿತ ನಿರ್ವಾಹಕರು ಉಪಸ್ಥಿತರಿದ್ದರು.
ಮಧ್ಯಾಹ್ನದ ವೇಳೆಗೆ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಮತ್ತು ಬಹುಮಾನ ವಿತರಣಾ ಸಮಾರಂಭ ಅತ್ಯಂತ ವೈಭವದಿಂದ ನೆರವೇರಿತು. ಮುಖ್ಯ ಅತಿಥಿಯಾಗಿ ಶ್ರೀ ರಾಮ ದೇವಾಡಿಗ, ಉಪಪ್ರಾಂಶುಪಾಲರು, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿ ಆಗಮಿಸಿ, ಕಾರ್ಯಕ್ರಮವನ್ನು ಕಂಗೊಳಿಸಿದರು. ಪೋಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಿವಿಯನ್ ಕ್ರಾಸ್ಟಾ, ಕಾರ್ಯದರ್ಶಿ ಶ್ರೀಮತಿ ರೀನಾ ಮೆಂಡೊನ್ಸಾ, ಉಪಪ್ರಾಂಶುಪಾಲರು, ಆಡಳಿತ ನಿರ್ವಾಹಕರು ಹಾಗೂ ಶಾಲಾ ಸಂಸತ್ತಿನ ಸದಸ್ಯರನ್ನು ಕುಣಿತ ಭಜನೆ ತಂಡವು ಭಾವಪೂರ್ಣವಾಗಿ ಸ್ವಾಗತಿಸಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ನಡೆಯಿತು. ಶ್ರೀಮತಿ ಸುನೀತಾ ಮೆಂಡೊನ್ಸಾ ಸ್ವಾಗತ ಭಾಷಣ ನೀಡಿದರು. ನಂತರ ದೀಪ ಬೆಳಗಿಸುವಿಕೆ ಹಾಗೂ ಶಾಲಾ ವಾರ್ಷಿಕ ಪತ್ರಿಕೆ ಬಿಡುಗಡೆ ನಡೆಯಿತು. ಮೂರು ವಿಭಾಗದ ಸಂಯೋಜಕರು ಅತ್ಯಂತ ಶಿಸ್ತಿನ ರೀತಿಯಲ್ಲಿ ವಾರ್ಷಿಕ ಪ್ರಶಸ್ತಿ ವಿತರಣೆ ನೆರವೇರಿಸಿದರು. ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಆಡಳಿತ ನಿರ್ವಾಹಕರು, ಪೋಷಕ ಶಿಕ್ಷಕ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮ್ಮುಖದಲ್ಲಿ ವಿವಿಧ ಚಟುವಟಿಕೆ ಮತ್ತು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿ ಶ್ರೀ ರಾಮ ದೇವಾಡಿಗರವರು ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಚುರುಕುತನವನ್ನು ಮೆಚ್ಚಿದರು. ಅವರು ಕನ್ನಡ ರಾಜ್ಯೋತ್ಸವದ ಹಿನ್ನೆಲೆಯನ್ನು ಸ್ಮರಿಸಿ, “ಮನೆಯೇ ಮೊದಲ ಶಾಲೆ – ಪೋಷಕರೇ ಮೊದಲ ಗುರುಗಳು” ಎಂಬ ಮೌಲ್ಯಭರಿತ ಸಂದೇಶವನ್ನು ನೀಡಿದರು. ವಿದ್ಯಾರ್ಥಿಗಳು - ಪೋಷಕರು ಮತ್ತು ಶಿಕ್ಷಕರಿಗೆ ಗೌರವ ನೀಡಬೇಕೆಂದು ಹಾಗೂ ಪೋಷಕರಿಗೆ ಮೊಬೈಲ್ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ :
೬ನೇ ತರಗತಿಯ ವಿದ್ಯಾರ್ಥಿಗಳಿಂದ ಜನಪದ ನೃತ್ಯ “ಭಾಗ್ಯದ ಬಾಳೆಗಾರ” ೭ನೇ ತರಗತಿಯವರಿಂದ ಕನ್ನಡದ ಮಹತ್ವದ ನೃತ್ಯ ೮ನೇ ತರಗತಿಯವರಿಂದ “ಹೇಳಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನವಾಗಿ ಯೋಚಿಸಿದಾಗ ನಿಜ ತಿಳಿಯುತ್ತದೆ” ಎಂಬ ಕಥಾಧಾರಿತ ನೃತ್ಯ. ಎಲ್ಲವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲರಾದ ಫಾ. ಮ್ಯಾಕ್ಸಿಮ್ ಡಿಸೋಜಾರವರು ಕನ್ನಡದ ಮೇಲಿರುವ ಅವರ ಗೌರವ ಮತ್ತು ರಾಜ್ಯೋತ್ಸವದ ಅರ್ಥವನ್ನು ವಿವರಿಸಿ, ಡಿಸೆಂಬರ್ ೬ ರಂದು ನಡೆಯಲಿರುವ ರಜತಮಹೋತ್ಸವ ಕಾರ್ಯಕ್ರಮದ ಮಾಹಿತಿ ನೀಡಿದರು. ಪೋಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಿದ ಶಿಕ್ಷಕಿ ಸುಶಿತಾ ಡಯಾಸ್ ಮತ್ತು ಶಿಕ್ಷಕಿ ರೀನಾರವರಿಗೆ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಶಿಕ್ಷಕಿ ಮೇಘಶ್ರೀ ಧನ್ಯವಾದ ಸಮರ್ಪಿಸಿದರು. ಕೊನೆಯದಾಗಿ ರಾಷ್ಟç ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

